ಗುರುವಿನ ಗುಲಾಮನಾಗುವ ತನಕ
ಪುರಂದರ ದಾಸರು
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ || ಪ ||
ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ || 1 ||
ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ || ೨ ||
ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠಲನ
ಸೇರಿಕೊಂಡು ಮುಕ್ತಿ ತಾ ಪಡೆಯುವ ತನಕ || ೩ ||